• samvada@gmail.com
  • 080-26640244

ಯುವಜನರ ಕಾಡಿದೆ ಕೊರೊನಾ; ಆದರೆ ಭರವಸೆ ಕಳೆದುಕೊಳ್ಳದಿರೋಣ!

ಯುವಜನರ ಕಾಡಿದೆ ಕೊರೊನಾ; ಆದರೆ ಭರವಸೆ ಕಳೆದುಕೊಳ್ಳದಿರೋಣ!

ಸಾಮಾಜಿಕ ಪರಿಸರದಲ್ಲಿ ಮನುಷ್ಯರಾದ ನಾವು ಸಂಘಜೀವಿಗಳಾಗಿದ್ದು ಮತ್ತೊಬ್ಬರ ಸಾಮೀಪ್ಯ, ಸಹವಾಸವನ್ನು ಬಯಸುತ್ತೇವೆ. ಆದರೆ ಮನುಷ್ಯರ ಈ ಸಹಜ ಗುಣವನ್ನು ತಲೆಕೆಳಗಾಗಿಸುವಂತಹ ಪರಿಸ್ಥಿತಿ ಈಗ ಬಂದೊದಗಿದೆ. ಇದರ ಮುಖ್ಯ ರಾಯಭಾರಿ ಕೊರೋನಾ ಎಂಬ ವೈರಾಣು. ಕಣ್ಣಿಗೆ ಕಾಣದ ಈ ವೈರಸ್‌ ಇಂದು ಇಡೀ ವಿಶ್ವವನ್ನೇ ಅಲುಗಾಡಿಸುತ್ತಿದೆ, ಇದಕ್ಕೆ ಭಾರತವೂ ಹೊರತಾಗಿಲ್ಲ.


ಮನುಷ್ಯ ಎಷ್ಟೇ ಬೆಳೆದರು, ಕಲಿತರು, ಜ್ಞಾನಿಯಾದರೂ ತನಗರಿವಿಲ್ಲದ್ದು ಪ್ರಕೃತಿಯಲ್ಲಿ ಸಾಕಷ್ಟಿದೆ ಎಂಬುದನ್ನು ನಾವು ಸದಾ ಮರೆಯುತ್ತಲೇ ಬಂದಿದ್ದೇವೆ. ನೀನು ಏನು ನೀಡುತ್ತೇಯೊ ಅದೇ ನಿನಗೆ ಮರುಕಳಿಸುತ್ತದೆ ಎನ್ನುವ ಮಾತು ಇಂದಿಗೆ ಅಕ್ಷರಶಃ ಸತ್ಯವಾಗಿದೆ. ಪ್ರಕೃತಿಯನ್ನು ಮನುಷ್ಯ ಎಷ್ಟು ನಿಕೃಷ್ಟವಾಗಿ ಕಾಣುತ್ತಿದ್ದಾನೋ ಅಷ್ಟೇ ಕಠಿಣವಾಗಿ ಪ್ರಕೃತಿ ಮಾನವನನ್ನು ಶಿಕ್ಷಿಸುತ್ತಿದೆ. ವಿಪರ್ಯಾಸವೆಂದರೆ ಈ ಶಿಕ್ಷೆಗೆ ಮುಗ್ದರೂ ಸಹ ಬಲಿಯಾಗುತ್ತಿದ್ದಾರೆ. ಹಾಗಾದರೆ ಇದಕ್ಕೆ ಕೊನೆಯಿಲ್ಲವೇ ಎಂದು ಯೋಚಿಸಿದರೆ, ಖಂಡಿತವಾಗಿಯೂ ಇದೆ ಎನ್ನುವ ಉತ್ತರ ಸಿಗುತ್ತದೆ. ಆದರೆ ಅಲ್ಲಿಯವರೆಗೆ ಜೀವನ ಹೇಗೆ ಎಂದು ನೆನಪಿಸಿಕೊಂಡಾಗ ಭಯವಾಗುತ್ತದೆ. ಈ ಮಹಾಮಾರಿಯಿಂದ ಒಂದಷ್ಟು ಹೆಚ್ಚೇ ನಷ್ಟವಾಗಿರುವುದು ಯುವಜನರಿಗೆ ಎನ್ನುವುದು ನನ್ನ ಅಭಿಪ್ರಾಯ.

ನಿಮಗೆಲ್ಲರಿಗೂ ತಿಳಿದಿರುವಂತೆ ಕೋವಿಡ್‌ – 19 ರ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಸೋಂಕಿಗೆ ಒಳಗಾಗುತ್ತಿರುವವರು ಮತ್ತು ಸಾವನಪ್ಪುತ್ತಿರುವವರ ಸಂಖ್ಯೆಯಲ್ಲಿ ಹಿರಿಯರನ್ನು ಹೊರತುಪಡಿಸಿದರೆ, ಯುವಜನರೇ ಹೆಚ್ಚಿದ್ದಾರೆ. ಸಮೀಕ್ಷೆಗಳ ಪ್ರಕಾರ ಇದಕ್ಕೆ ಹಲವಾರು ಕಾರಣಗಳಿದ್ದರೂ ಸಹ ಈ ಸಾವುಗಳು
ಅವರ ಜೀವವನ್ನಷ್ಟೇ ಕಿತ್ತುಕೊಳ್ಳದೇ ಅವರ ಕುಟುಂಬಗಳ ಜೀವನವನ್ನೂ ಕಸಿದುಕೊಳ್ಳುತ್ತಿವೆ. ಏಪ್ರಿಲ್‌
17 ರ ‘ದಿ ನ್ಯೂಸ್‌ ಮಿನಿಟ್‌’ನ ವರದಿಯ ಪ್ರಕಾರ ಮಾರ್ಚ್‌ 5 ರಿಂದ ಏಪ್ರಿಲ್‌ 5 ರವರೆಗೆ ವರದಿಯಾಗಿರುವ ಒಟ್ಟು 67,298 ಕೋವಿಡ್‌ ಪ್ರಕರಣಗಳಲ್ಲಿ 19,378 ಪ್ರಕರಣಗಳು 15ರಿಂದ 29ರ ವಯಸ್ಸಿನವರದ್ದಾಗಿದೆ. ಹಾಗಾಗಿ ಈ ರೋಗವು ಯುವಜನರ ಆರೋಗ್ಯವನಷ್ಟೆ ಹಾಳು ಮಾಡುತ್ತಿಲ್ಲ, ಬದಲಿಗೆ ಅವರ ಜೀವನ, ಶಿಕ್ಷಣ, ಉದ್ಯೋಗ, ಭವಿಷ್ಯ, ಕುಟುಂಬಗಳನ್ನೂ ಅಸ್ತವ್ಯಸ್ತ ಮಾಡುತ್ತಿದೆ.

ಸಾಮಾನ್ಯವಾಗಿ ಯುವಜನರನ್ನು ನಾವು ಎರಡು ಹಂತಗಳಲ್ಲಿ ನೋಡಬಹುದು, ವಿದ್ಯಾರ್ಥಿಗಳು ಮತ್ತು ಯುವಜನರು. ಈಗಿನ ಈ ಕಠಿಣ ಪರಿಸ್ಥಿತಿಯು ಈ ಎರಡೂ ಹಂತಗಳನ್ನು ಗೊಂದಲದ ಗೂಡಿಗೆ ನೂಕಿದೆ. ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸದ, ಭವಿಷ್ಯದ ಕುರಿತು ಚಿಂತೆಯಾದರೆ, ಉದ್ಯೋಗಿಗಳಿಗೆ ಕೆಲಸ ಕಳೆದುಕೊಂಡ, ಹೊಸ ಕೆಲಸಗಳು ಸಿಗದಂತಹ ಸಂದಿಗ್ಧ ಪರಿಸ್ಥಿತಿ ಒದಗಿದೆ. ಇದೇ ಕಾರಣಕ್ಕೆ ನನಗೆ ಕೋವಿಡ್‌ – 19ರಿಂದ ಹೆಚ್ಚು ಹಾನಿಯಾಗಿರುವುದು ಯುವ ಸಮುದಾಯಕ್ಕೆ ಎಂದು ಅನ್ನಿಸುವುದು. ಆದ್ದರಿಂದ ಇಂತಹ ಯುವಜನರ ದುಡಿಮೆಯ ಮೇಲೆ ಅವಲಂಬಿತವಾಗಿರುವ ಕುಟುಂಬಗಳ ಪರಿಸ್ಥಿತಿ ನೋಡಿದರೆ ನಿಜವಾದ ಸಂಕಟದ ಅರ್ಥವಾಗುತ್ತದೆ.

ನಾವು ಕಂಡ ಹಾಗೆ ಉದ್ಯೋಗ ಕಳೆದುಕೊಂಡ ಯುವಜನರು ತಮ್ಮ ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಈಗ ತಮ್ಮ ಕೈಲಿರುವ ಕೃಷಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಲಾಗದೇ, ಹೊಸ ಕೆಲಸ ಹುಡುಕಿಕೊಂಡು ನಗರಗಳಿಗೂ ಹೋಗಲಾಗದೇ ಅಡ್ಡ ಕತ್ತರಿಗೆ ಸಿಲುಕಿದ ಅಡಿಕೆಯಂತಾಗಿದ್ದಾರೆ. ಎಷ್ಟೋ ಮಂದಿ ನಗರಗಳಿಂದ ಹಿಂತಿರುಗಲಾರದೆ ಅಲ್ಲಿಯೇ ಕೈಗೆ ಸಿಗುವ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಕೆಲವರು ಈ ಕಷ್ಟದ ಸಮಯವನ್ನು ಸಹಿಸಲಾಗದೆ, ಅದನ್ನು ನಿಭಾಯಿಸಲಾಗದೆ ತಮ್ಮನ್ನು ತಾವೇ ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ.

ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ?

ಖಂಡಿತಾ ಇದೆ. ಅದು ಕೂಡ ನಮ್ಮಲ್ಲಿಯೇ ನಮ್ಮ ಮನಸ್ಥಿತಿಗಳಲ್ಲಿಯೇ ಇದೆ. ಇದನ್ನು ಸಾಬೀತು ಪಡಿಸಿರುವ ಯುವಜನರು ಸಹ ನಮ್ಮಲ್ಲಿಯೇ ಇದ್ದಾರೆ. ಹೌದು, ಏನು ಮಾಡಬೇಕೆಂದು ದಿಕ್ಕು ತೋಚದೆ ಇರುವ ಯುವಜನರ ನಡುವೆ ತಮ್ಮಲ್ಲಿಯೇ ಇರುವ ಕೌಶಲ್ಯ, ಜ್ಞಾನ, ಸವಲತ್ತು, ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮದೇ ಸ್ವ ಉದ್ಯೋಗ ಆರಂಭಿಸಿ, ಉತ್ತಮ ಜೀವನ ನಡೆಸುತ್ತಿದ್ದಾರೆ. ತರಕಾರಿ ಮಾರುವುದು, ಸೊಪ್ಪು ಮಾರುವುದು, ಹಪ್ಪಳ, ತುಪ್ಪ, ಸಂಡಿಗೆ ತಯಾರಿಸಿ ಮಾರುವುದು, ಮೊಬೈಲ್‌ ಕರೆನ್ಸಿ ಹಾಕುವುದು, ಕೋಳಿ, ಕುರಿ, ಮೇಕೆ ಸಾಕಾಣಿಕೆ, ಹೈನುಗಾರಿಕೆ, ದಿನಸಿ ಅಂಗಡಿ, ನರ್ಸರಿಗಳಂತಹ ಉದ್ಯೋಗಗಳೇ ಇದಕ್ಕೆ ಸಾಕ್ಷಿ. ಇನ್ನು ಕೆಲವರು ತಮ್ಮ ನಗರದ ದುಡಿಮೆಯ ಉಳಿತಾಯವನ್ನು ಬಂಡವಾಳವನ್ನಾಗಿಸಿ ತಮ್ಮ ಕೃಷಿ ಭೂಮಿಯನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದಾರೆ. ಇದನ್ನೇ ಅಲ್ಲವೆ ಅತ್ಮಸ್ಥೈರ್ಯ ಎನ್ನುವುದು. ಕೆಲವರು ತಮ್ಮ ಸ್ವ-ಉದ್ಯಮದಲ್ಲಿ ನಾಲ್ಕೈದು ಜನರಿಗೆ ಉದ್ಯೋಗವಕಾಶವನ್ನೂ ನೀಡುವಂತಹ ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಇಂತಹ ದಿಟ್ಟ ಯುವಜನರಿಗೆ ನನ್ನ ಅಭಿನಂದನೆ.

ಇದೆಲ್ಲವನ್ನೂ ಅವಲೋಕನ ಮಾಡಿದ ನಂತರ ನನಗನ್ನಿಸಿದ್ದು ಇಷ್ಟು: ನಾವು ಪರಿಸ್ಥಿತಿಗಳನ್ನು ಬದಲಿಸಲು ಸಾಧ್ಯವಾಗದೇ ಇದ್ದಾಗ ನಮ್ಮ ಮನಸ್ಥಿತಿಗಳನ್ನು ಬದಲಿಸಿಕೊಳ್ಳಬೇಕು. ಆಗ ಪರಿಸ್ಥಿತಿಯೂ ತನ್ನಿಂತಾನೆ ಬದಲಾಗುತ್ತದೆ. ದೃಢ ಇಚ್ಛಾಶಕ್ತಿ, ಸಂಕಲ್ಪ, ತಾಳ್ಮೆ, ಬದ್ಧತೆ, ಕಠಿಣ ಪರಿಶ್ರಮಗಳು ಏನನ್ನಾದರೂ ಬದಲಿಸುವ ಶಕ್ತಿ ಹೊಂದಿವೆ. ಆದ್ದರಿಂದ ಪರಿಸ್ಥಿತಿಗೆ ಹೆದರಿ ನಮ್ಮನ್ನು ನಾವು ಕುಗ್ಗಿಸಿಕೊಳ್ಳುವುದಕ್ಕಿಂತ, ಧೈರ್ಯದಿಂದ ಎದುರಿಸಿ ಸದೃಢರಾಗೋಣ ಎಂಬುದು ನನ್ನ ಆಶಯ.

ಮೇಘಾ ರಾಮದಾಸ್

ಸಿರಾ ತಾಲ್ಲೂಕಿನ ಗುಳಿಗೇನಹಳ್ಳಿಯ ಮೇಘಾ ಓದಿರುವುದು ತಾಂತ್ರಿಕ ಶಿಕ್ಷಣವನ್ನಾದರೂ (ಬಿ.ಇ) ಸಹಜ ಕೃಷಿ, ಯುವಜನ ಹಕ್ಕು ಹಾಗೂ ಸಾಮಾಜಿಕ ಕಾರ್ಯ ಅವರ ಆಸಕ್ತಿಯ ಕ್ಷೇತ್ರಗಳು. ಹಲವು ಸ್ವಯಂಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅವರು ಸಂವಾದ ಯೂತ್ ವರ್ಕ್‌ ಕೋರ್ಸ್‌ನ ಹಳೆಯ ವಿದ್ಯಾರ್ಥಿನಿ, ಗುಳಿಗೇನಹಳ್ಳಿಯ ಹೊಂಬಾಳೆ ಟ್ರಸ್ಟ್‌ನ ಟ್ರಸ್ಟಿ.