ಸಮಾಜದ ಕಟು ವಾಸ್ತವ ತೋರುವ ‘ಜೈ ಭೀಮ್’
‘ಜೈಭೀಮ್ ಸಿನಿಮಾ ಕೂಡ ಥ್ರಿಲ್ಲರ್ ಮಾದರಿಯಲ್ಲೇ ಹೆಣೆದಿದ್ದರೂ ಇಂಡಿಯಾದ ಸಂವಿಧಾನವನ್ನೇ ಪ್ರಮುಖ ವಸ್ತುವನ್ನಾಗಿಸಿ ಸಿನಿಮಾ ಕಟ್ಟಿದ್ದಾರೆ…..
‘ಸಿಂಗಮ್’ ಸಿನಿಮಾದಂತಹ ಆ್ಯಕ್ಷನ್ ಥ್ರಿಲ್ಲರ್ ಶೈಲಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ಸೂರ್ಯ ಓಟಿಟಿಯಲ್ಲಿ ಬಿಡುಗಡೆಯಾದ ಸತತ ಎರಡೂ ಸಿನೆಮಾಗಳಲ್ಲಿ ಬಯೋಪಿಕ್ ಮಾದರಿಯ ಕತೆಗಳನ್ನೇ ಆಯ್ದುಕೊಂಡಿದ್ದಾರೆ. ಹಿಂದಿನ ಆ್ಯಕ್ಷನ್ ಸಿನೆಮಾಗಳಿಗಿಂತ 2020ರಲ್ಲಿ ಹೊರಬಂದ ‘ಸೂರಾರೈ ಪೋಟ್ರು’ ಮತ್ತು ಈಗ ಹೆಚ್ಚು ಸುದ್ದಿಯಲ್ಲಿರುವ ‘ಜೈ ಭೀಮ್’ ಸಿನೆಮಾಗಳಿಗಿಂತ ನಟ ಸೂರ್ಯ ಬಯೋಪಿಕ್ ಮಾದರಿಯನ್ನು ಥ್ರಿಲ್ಲರ್ ಆಗಿ ಕಟ್ಟುವ ಹೊಸ ಪ್ರಕಾರದ ಸಿನಿಮಾಗಳನ್ನು ನಿರ್ವಹಿಸಿದ್ದಾರೆ. ಓಟಿಟಿ ಕಾರಣದಿಂದ ಎರಡೂ ಸಿನಿಮಾಗಳು ಅಪಾರ ಯಶಸ್ಸು ಕಂಡಿದೆ. ಜೈ ಭೀಮ್ ಮತ್ತು ಸೂರಾರೈ ಪೋಟ್ರು ಸಿನಿಮಾಗಳು ಕೆಲಸವನ್ನು ತೀವ್ರವಾಗಿ ಪ್ರೀತಿಸುವ, ಬದ್ಧತೆ ತೋರಿದ ವ್ಯಕ್ತಿಗಳ ಕತೆಗಳು.
ಸೂರಾರೈ ಪೋಟ್ರುವಿನಲ್ಲಿ ಸೂರ್ಯ ಅವರ ಸ್ಟಾರ್ ಇಮೇಜ್ ಕಾರಣಕ್ಕೆ ಚಿತ್ರಕತೆ ಬರೆದಾಗ ಥ್ರಿಲ್ಲರ್ ಸಿನಿಮಾ ಮಾದರಿಯಲ್ಲೇ ನಿರ್ಮಿಸಿದ್ದರು. ಜೈಭೀಮ್ ಸಿನಿಮಾ ಕೂಡ ಥ್ರಿಲ್ಲರ್ ಮಾದರಿಯಲ್ಲೇ ಹೆಣೆದಿದ್ದರೂ ಇಂಡಿಯಾದ ಸಂವಿಧಾನವನ್ನೇ ಪ್ರಮುಖ ವಸ್ತುವನ್ನಾಗಿಸಿ ಸಿನಿಮಾ ಕಟ್ಟಿದ್ದಾರೆ. ಇಂಡಿಯಾ ಸಂವಿಧಾನದ ಮನುಷ್ಯ ಪರವಾದ ಕಾಯ್ದೆಗಳು ಕಮರ್ಷಿಯಲ್ ಸಿನೆಮಾಗಳಿಗೂ ಪ್ರಮುಖ ವಸ್ತುವಾಗಬಲ್ಲದು ಎನ್ನುವುದನ್ನು ತೋರಿಸಿಕೊಟ್ಟಿರುವುದು ಈ ಸಿನಿಮಾದ ಹೆಗ್ಗಳಿಕೆ. ಇದನ್ನು ಸೂರ್ಯ ಅವರಂತಹ ಜನಪ್ರಿಯ ನಟ ಅಭಿನಯಿಸಿದ್ದು ಕೂಡ ಪ್ಲಸ್ ಪಾಯಿಂಟ್. ಈ ಪ್ರಕಾರದ ಸಿನಿಮಾ ಹಿಂದಿಯ ‘ಆರ್ಟಿಕಲ್ 15’ ಕನ್ನಡದ ‘ಆ್ಯಕ್ಟ್ 1978’ ನಲ್ಲಿ ಬಂದಿತ್ತಾದರೂ ದೊಡ್ಡ ಮಟ್ಟದ ಯಶಸ್ಸು ಗಳಿಸಿರಲಿಲ್ಲ.
ಇಂಡಿಯಾದ ಸಂವಿಧಾನ ಪ್ರಜೆಗಳು ಅಕ್ರಮವಾಗಿ ಪೊಲೀಸರಿಂದ ಬಂಧನಕ್ಕೊಳಗಾಗುವ ಅಪಾಯವನ್ನು ಅರಿತು ಹೆಬಿಯಸ್ ಕಾರ್ಪಸ್ ಅರ್ಜಿ ದಾಖಲಿಸುವ ಅವಕಾಶ ಸಂವಿಧಾನದಲ್ಲಿದೆ. ಈ ಸೂಕ್ಷ್ಮ ವಿಚಾರವನ್ನು ಕಮರ್ಷಿಯಲ್ ಸಿನಿಮಾ ಚೌಕಟ್ಟಿನಲ್ಲಿ ದೊಡ್ಡ ಸಮೂಹಕ್ಕೆ ಅರ್ಥವಾಗುವಂತೆ ಜೈ ಭೀಮ್ ಚಿತ್ರಕತೆ ಕಟ್ಟಿದ್ದಾರೆ. ನಾನು ಗಮನಿಸಿದಂತೆ ಸಿನಿಮಾದ ಎರಡು ಕಡೆ ‘ಫ್ರೇಮ್ ವಿದಿನ್ ಫ್ರೇಮ್’ ಬಳಸಿ ಒಂದು ಕಡೆ ಪೊಲೀಸ್ ಪಾತ್ರಧಾರಿ ಮತ್ತೊಂದು ಕಡೆ ವಕೀಲ ಪಾತ್ರವನ್ನು ನಿಲ್ಲಿಸಿ ಕತೆ ಹೇಳಲು ಯತ್ನಿಸಿದ್ದಾರೆ. ಇದೇನು ಅದ್ಭುತ ಅನಿಸೋ ತಂತ್ರವಲ್ಲ. ಆದರೆ ಕಾನೂನಿನ ಚೌಕಟ್ಟಲ್ಲಿ ಎರಡು ಭಿನ್ನ ಅಂಗಗಳು ಯಾವ ರೀತಿ ಕೆಲಸ ಮಾಡುತ್ತವೆ ಅನ್ನುವುದನ್ನು ನೇರವಾಗಿ ಹೇಳಿದೆ. ಸಿನಿಮಾ ನೋಡುವಾಗ ಅದೇ ದೃಶ್ಯದಲ್ಲಿ ಆ ಎರಡು ಪಾತ್ರಗಳ ಸಂಭಾಷಣೆಯನ್ನು ಕೇಳಿಸಿಕೊಂಡಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗಿರುತ್ತೆ. ಈ ದೃಶ್ಯವನ್ನು ಬಿಟ್ಟರೆ ಸಿನಿಮಾದ ಕತೆಯನ್ನು ಹೆಚ್ಚು ತೀವ್ರವಾಗಿ ಹೇಳುವ ತಂತ್ರಗಳು ಕಡಿಮೆ.
ಜೈ ಭೀಮ್ ಸಿನಿಮಾ ಹೆಚ್ಚು ಚರ್ಚೆಗೊಳಗಾಗಿದ್ದು ಬುಡಕಟ್ಟು ಸಮುದಾಯದ ಪರ ದನಿ ಎತ್ತಿದೆ ಮತ್ತು ಅಂಬೇಡ್ಕರ್ ಅಗತ್ಯವನ್ನು ಒತ್ತಿ ಹೇಳಿದೆ ಎನ್ನುವ ಕಾರಣ ಇರಬಹುದು. ಸಿನಿಮಾ ಕೂಡ ಇಂತಹ ಅಂಶಗಳನ್ನು ಹೇಳಲು ಯತ್ನಿಸಿದೆ. ಇರುಳಿಗ ಸಮುದಾಯದ ರಾಜಕಣ್ಣು ಎಂಬಾತ ಇಲಿ ಬೇಟೆಯಾಡುವ ಸಂದರ್ಭವೊಂದನ್ನು ಗಮನಿಸೋಣ. ರಾಜಕಣ್ಣುವಿನ ಹೆಂಡತಿಗೆ ಮರಿ ಇಲಿಯೊಂದು ಸಿಕ್ಕಾಗ ಅದನ್ನು ಆಕೆ ಕೊಲ್ಲವುದಿಲ್ಲ. ಬದಲಾಗಿ ಮುದ್ದು ಮಾಡಿ ಹೊರಗೆ ಬಿಡುತ್ತಾಳೆ. ಇದಕ್ಕೆ ಆಕೆ ಕೊಡುವ ಕಾರಣ ಅರ್ಥಪೂರ್ಣವಾಗಿದೆ. ಮರಿ ಇಲಿಯಾದ್ರಿಂದ ಇದರಿಂದ ನಮ್ಮ ಹೊಟ್ಟೆ ತುಂಬಲ್ಲ ಮತ್ತು ಅದಕ್ಕೆ ಇನ್ನೂ ಬದುಕುವ ಅವಕಾಶವಿದೆ ಎಂದು ಹೇಳುತ್ತಾಳೆ. ಇನ್ನೊಂದೆಡೆ ಮನೆ ಸೇರುವ ಹಾವನ್ನು ಕಾಡಿಗೆ ಬಿಡುವಾಗ ಇರುಳಿಗರು ವಹಿಸುವ ಮುತುವರ್ಜಿ, ಮನುಷ್ಯರಿಂದ ದೂರವಿರು ಎಂದು ಹಾವನ್ನು ಎಚ್ಚರಿಸುವ ಕಾಳಜಿಯು ಬುಡಕಟ್ಟು ಸಮುದಾಯದ ಜೀವಪ್ರೀತಿಯ ಮೌಲ್ಯವನ್ನು ಹೇಳುತ್ತದೆ. ಆದರೆ ಇಂತಹ ದೃಶ್ಯಗಳನ್ನು ಸಂಭಾಷಣೆ ಮೂಲಕ ಹೇಳಲಾಗಿದೆಯೇ ಹೊರತು ಸಿನಿಮಾ ತಂತ್ರಗಳನ್ನು ಬಳಸಿಲ್ಲ.
ನಾನು ಈ ಹಿಂದೆ ‘ಮೆರ್ಕು ತೊಡರ್ಚಿ ಮಲೈ’ ಎಂಬ ತಮಿಳಿನ ಅದ್ಭುತ ಸಿನಿಮಾವೊಂದನ್ನು ನೋಡಿದ್ದೆ. ಆ ಸಿನಿಮಾ ಕೂಡ ಬುಡಕಟ್ಟು ಸಮುದಾಯದ ಬದುಕಿನ ಹೋರಾಟದ ಕುರಿತಾಗಿದೆ. ಇಲ್ಲೂ ಕೂಡ ಹಾವುಗಳನ್ನು ತಮ್ಮ ಸಹಜೀವಿಗಳೆಂದು ಒಪ್ಪಿಕೊಳ್ಳುವ ಜನರ ಬದುಕನ್ನು ತಿಳಿಸುವ ಸೀನ್ ಒಂದಿದೆ. ಆ ದೃಶ್ಯದಲ್ಲಿ ಒಬ್ಬ ಬುಡಕಟ್ಟು ಸಮುದಾಯದ ವ್ಯಕ್ತಿ ಸೈಕಲ್ ತುಳಿಯುತ್ತಾ ಹೋಗುವಾಗ ಹಾವು ರಸ್ತೆ ದಾಟಲು ಶುರು ಮಾಡಿರುತ್ತೆ. ಸೈಕಲ್ನಲ್ಲಿರುವಾತ ಕೊಂಚವೂ ವಿಚಲಿತನಾಗದೆ, ತೆವಳುತ್ತಿರುವ ಹಾವಿಗೆ ಸಾಕಷ್ಟು ಜಾಗ ಬಿಟ್ಟು ಸೈಕಲ್ ತುಳಿಯುತ್ತಾ ತನ್ನ ಪಾಡಿಗೆ ಮುಂದುವರಿಯುತ್ತಾನೆ. ಈ ದೃಶ್ಯವನ್ನು ಟಾಪ್ ಆ್ಯಂಗಲ್ನಿಂದ ತೋರಿಸಲಾಗಿದೆ. ಇಂತಹ ಒಂದು ದೃಶ್ಯ ಯಾವುದೇ ಸಂಭಾಷಣೆ ಇಲ್ಲದಿದ್ದರೂ ಸುಲಭವಾಗಿ ಅರ್ಥವಾಗುತ್ತದೆ. ಈ ನಿಟ್ಟಿನಲ್ಲಿ ಜೈ ಭೀಮ್ ಸಿನಿಮಾವನ್ನು ಗಮನಿಸಿದರೆ ಸಿನಿಮ್ಯಾಟಿಕ್ ತಂತ್ರಗಳ ವಿಚಾರದಲ್ಲಿ ಸಾಧಾರಣವಾಗಿದೆ .
ಜೈ ಭೀಮ್ ಸಿನಿಮಾ ಕುರಿತ ಕೆಲವು ಚರ್ಚೆಗಳನ್ನು ಗಮನಿಸಿದೆ. ಉತ್ತಮ ಕಥಾವಸ್ತು ಇರುವ ಪಾಪ್ಯುಲರ್ ಸಿನಿಮಾಗಳನ್ನು ಸಿನಿಮ್ಯಾಟಿಕ್ ದೃಷ್ಟಿಯಿಂದ ಚರ್ಚಿಸಬಾರದು ಎಂಬ ಅಭಿಪ್ರಾಯ ಹೊರಬಂದಿದೆ. ಆದರೆ ಈ ಅಭಿಪ್ರಾಯ ತಪ್ಪು ಅನ್ನುವುದು ನನ್ನ ಅನಿಸಿಕೆ. ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ‘ಸರ್ಪಟ್ಟ ಪರಂಪರೈ’ ಪಾಪ್ಯುಲರ್ ಸಿನಿಮಾ ಚೌಕಟ್ಟಿನಲ್ಲೇ ಎಂತಹ ಅದ್ಭುತ ಸಿನಿಮಾವನ್ನು ನಿರ್ಮಿಸಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆ. ಇದರ ಹೊರತಾಗಿ ಜೈ ಭೀಮ್ ಒಂದು ಒಳ್ಳೆಯ ಮತ್ತು ಹೆಚ್ಚು ಅಗತ್ಯವಿರುವ ಸಿನಿಮಾ. ಹೀಗಾಗಿ ನಿರ್ದೇಶಕ ಗ್ನಾನವೇಲ್, ನಿರ್ಮಾಪಕಿ ಜ್ಯೋತಿಕಾ ಹಾಗೂ ನಟ ‘ಸೂರಿಯ’ ಮತ್ತವರ ಬಳಗಕ್ಕೆ ಶರಣು.
ತಮಿಳಿನಲ್ಲಿ ಬುಡಕಟ್ಟು ಸಮುದಾಯದ ಬದುಕು, ಹೋರಾಟಗಳಿಗೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ‘ಮೆರ್ಕು ತೊಡರ್ಚಿ ಮಲೈ’, ಮಲೆಯಾಳದಲ್ಲಿ ‘ಪ್ಯಾಪಿಲಿಯೋ ಬುದ್ಧ’ ಮೊದಲಾದ ಅದ್ಭುತ ಸಿನಿಮಾಗಳಿವೆ. ಪೊಲೀಸರ ದೌರ್ಜನ್ಯ ಕುರಿತ ‘ವಿಸಾರಣೈ’ ನನಗೆ ಇಷ್ಟವಾಗಿತ್ತು. ಇದೀಗ ಜೈಭೀಮ್ ಕೂಡ ಇಂಡಿಯಾದ ಕಟು ವಾಸ್ತವವನ್ನು ತಿಳಿಸುವ ತಮಿಳಿನ ಪ್ರಮುಖ ಸಿನಿಮಾಗಳ ಸಾಲಿನಲ್ಲಿ ಸೇರಿಕೊಂಡಿದೆ.
* ರಕ್ಷಿತ್ ಬಂಗೇರ ‘ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್’ನ ಕ್ರಿಯಾಶೀಲ ಮಾಧ್ಯಮ ಕೋರ್ಸ್ನ ಹಳೆಯ ವಿದ್ಯಾರ್ಥಿ