ಪಾವನ ಭೂಮಿ ಬರೆದ ಎರಡು ಕವನಗಳು
ಪಾವನ ಭೂಮಿ ಬರೆದ ಎರಡು ಕವನಗಳು
ಎಲ್ಲ ಬೇಲಿ ಹರಿದು ಹುಟ್ಟಿದ ಒಲವಿಗೆ…
ಖಾಲಿತನದ ಸರಹದ್ದು ಮೀರಿ
ಬಯಲಿಗೆ ಹಜ್ಜೆ ಇಟ್ಟವಳಿಗೆ
ಎಲ್ಲ ಸದ್ದು ಮೀರಿ ಅದಿನ್ನೇನೋ
ಸೆಳೆದು ಪದ, ಸಂಗೀತ ,ಸ್ವರ
ಯಾವೂದೂ ಲಯದಲ್ಲಿಲ್ಲದ
ಆ ಉಸಿರು ನನಗಷ್ಟೇ ತಾಕುತಿತ್ತು
ಜನಜಾತ್ರೆಯ ಗೌಜುಗದ್ದಲ ಸೇರಿ
ಧವನದ ಘಮ ಮೀರಿ
ರಥಬೀದಿಯ ತೇರೊಂದು ದಿಕ್ಕು
ಸುಳಿಯುತ್ತಿದ್ದ ಸೆಳೆತ ಮತ್ತೊಂದು ದಿಕ್ಕು
ನಡುವೆ ಬೆವರ ಗಂಧ ನನಗಷ್ಟೇ ಸೋಕುತಿತ್ತು
ನೋವನ್ನು ಹೇಳಿಕೊಳ್ಳುತ್ತಿದ್ದವರ
ಮಾರಿಕೊಳ್ಳುತಿದ್ದವರ ಕಿಲುಬು ಕಾಸಿಗೆ
ಅದನ್ನು ಕೊಳ್ಳುತ್ತಿದ್ದವರ ನಡುವೆ
ನಾನೇನು ಹುಡುಕುತ್ತಿದ್ದೆನೊ ಅದು
ನನ್ನ ಕಾಲಿಗೆ ಸುತ್ತಿಕೊಂಡಿತ್ತು
ಅದೇ ಬಯಲ ಜಾತ್ರೆಯಲ್ಲಿ
ನೋವನ್ನೋ, ಕಸುವನ್ನೋ
ತನ್ನ ನೋವನ್ನೋ ಉಸಿರಿಗಿಟ್ಟು
ಊದುತ್ತಿದ್ದ , ನಾನು ಹುಡುಕುತ್ತಿದ್ದ
ಅದೇ ಆ ಪಿಳ್ಳಂಗೋವಿ ಹುಡುಗ ಸಿಕ್ಕಿದ್ದ
ಉಸಿರುಗುಸಿರು ಬೆರೆಸುವ
ಮೋಹವೋ ಮತ್ತೊ
ಎಳದು ಎದುರು ನಿಲ್ಲಿಸಿದ
ಕಾಲಕ್ಕೆ ಶಪಿಸುತ್ತಾ
ನಾನದೇ ಪಿಳ್ಳಂಗೋವಿಯ ಕೊಂಡು
ಅವನೂದಿದ್ದ ತುದಿಗೆ
ನನ್ನ ತುಟಿಯೊತ್ತಿ ಉಸಿರ ಬೆರೆಸಿದೆ
ಬೆರೆತ ಉಸಿರು ಜಂಗಮವಾಗಿ
ಧರೆಗೆ ದೊಡ್ಡವರ ಪಾದ ಸೋಕಿದ ಮೇಲೆ
ಎಲ್ಲ ಬೇಲಿ ಹರಿದು ಹುಟ್ಟಿದ ಒಲವಿಗೆ
ಬಂಧ ಯಾವುದು , ಹೆಸರು ಯಾವುದು…?
ಕುಲ ಯಾವುದು ನೆಲೆ ಯಾವುದು …?
* * *
ಭಾವನೆಗಳು ಮಾರಾಟಕ್ಕಿವೆ
ನೆನ್ನೆ, ಮೊನ್ನೆಯವು ಹಳತಾದವು
ಮತ್ತೆ ಕೆಲವು ಗುಜುರಿಗೆ ಬಿದ್ದವು
ಮನಸ್ಸಿನ ಮೂಲೆಯಲ್ಲಿ ಅಂದು ಮುದಕೊಟ್ಟು,
ಸರಸ ವಿರಸ ಸಮರಸಗಳನ್ನಿತ್ತ ಭಾವನೆಗಳು
ಮಾರಾಟಕ್ಕಿವೆ ಇಂದು…
ಅವನ್ನೆಲ್ಲಾ ಕೊಳ್ಳಲು, ಮಾರಲು
ಬಹಳಷ್ಟಿವೆ ಗೂಗಲ್ ಆನ್ಲೈನುಗಳು
ಒ.ಎಲ್.ಎಕ್ಸ್ ಡಾಟ್ ಕಾಂಗಳು
ಹಳೆಯದನ್ನೆಲ್ಲಾ ಹಣಕ್ಕೆ ಮಾರಿಬಿಡಲು
ಮಾರಾಟಕ್ಕಿವೆ ಭಾವನೆಗಳು…
ನಾ ಮಲಗಿದ ತೊಟ್ಟಿಲು
ಹಳೇ ಬಜಾಜ್ ಸ್ಕೂಟರು
ಕಬ್ಬಿಣದ ಪೆಟಾರಿ
ಅಜ್ಜಿಯ ಪ್ರೀತಿಯ ವೀಣೆತಂಬೂರಿ
ಎಲ್ಲವೂ…
ಮಾರಾಟಕ್ಕಿವೆ
ಅದರೊಂದಿಗೆ ನನ್ನ ಭಾವನೆಗಳೂ..
ಕನಸುಗಳನ್ನು ಹಂಚಿಕೊಂಡ ಮಂಚ
ಅಜ್ಜ ಕೂತ ಕುರ್ಚಿ, ಎಲ್ಲವೂ
ಬಿಕರಿಗಿವೆ…
ಅದರೊಂದಿಗಿನ ನನ್ನ ಬಂಧಗಳೂ..
ಹಳತನ್ನು ಮಾರಿಬಿಡಿ
ಎಂಬ ಜಾಹೀರಾತಿನೊಂದಿಗೆ,
ಅದರೊಂದಿಗಿನ ಭಾವನೆಗಳೂ…
ನನ್ನ ನೆನಪುಗಳೂ…
- ಪಾವನ ಭೂಮಿ
ಯುವ ಕವಯತ್ರಿ, ಚಿತ್ರಕಲಾವಿದೆ ಪಾವನ ಭೂಮಿ ತುಮಕೂರಿನವರು. ತುಮಕೂರಿನ ರವೀಂದ್ರ ಕಲಾನಿಕೇತನ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ಅಭ್ಯಾಸ ಮಾಡುತ್ತಿದ್ದಾರೆ. ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್‌ನ ಪತ್ರಿಕೋದ್ಯಮ ಕೋರ್ಸ್‌ನ ಹಳೆಯ ವಿದ್ಯಾರ್ಥಿನಿ.