• samvada@gmail.com
  • 080-26640244

ಕತೆ : ಸ್ಟೀಫನ್!!

ಕತೆ : ಸ್ಟೀಫನ್!!

ರಚನೆ: ಗೋವಿಂದ ಪ್ರಸಾದ ಎನ್.

g.prasada.n@gmail.com

Illustration: ಪಾವನ ಭೂಮಿ
pavana.bhoomi@gmail.com

ವಿಕ್ರಮ್ ರಾತ್ರಿ ಊಟ ಮುಗ್ಸಿ, ಮುಖಕ್ಕೊಂದು ಕೊರೋನಾ ಮಾಸ್ಕ್ ಮುಚ್ಕೊಂಡು, ಒಂದು ಕೈಯಲ್ಲಿ ಕವಲುಗೋಲು ಮತ್ತು ಇನ್ನೊಂದು ಕೈಲಿ ಉದ್ದ ಮಚ್ಚು ಹಿಡ್ಕೊಂಡು, “ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ..” ಗುನುಗ್ತಾ ಸ್ಮಶಾನದುದ್ದಕ್ಕೂ ಒಂದು ಬಾರಿ ಗಸ್ತು ತಿರುಗೋಕೆ ಅಂತ ಹೋಗ್ತಾನೆ. ಇವತ್ತು ಮರಣೋತ್ತರ ಪರೀಕ್ಷೆ ಮುಗಿಸಿ ಸಂಜೆ ಸ್ಮಶಾನಕ್ಕೆ ಕಳುಹಿಸಲಾಗಿದ್ದ ಪೂಜಾರಿ ಸತ್ಯನ ಮನೆಯ ದನದ ಕಳೇಬರ ಅರ್ಧ ಬೆಂದು ಚಿತೆಯಿಂದಾಚೆಗೆ ಬಂದಿದ್ನ ವಿಕ್ರಮ್ ಗಮನ್ಸಿದ್ದ. ಬಹಳ ದೂರ ಮುಂದೆ ಹೋದಾಗ ಮರವೊಂದರ ಮೇಲೆ ಚರ್ಮ ಬಿಳಚಿಕೊಂಡು ವಿದೇಶಿ ಶವದಂತಿರೋ ಅಪರಿಚಿತ ಹೆಣ ನೇತಾಡ್ತಿದ್ದಿದ್ದು ಕಾಣಿಸ್ತು. ಚೀರಾಡ್ತಿದ್ದ ಹೆಣವನ್ನ ನಿರ್ದಯವಾಗಿ ಎಳೆದು ಕೆಳಗೆ ಹಾಕಿ, ಹೆಗಲ ಮೇಲೇರಿಸಿ ವಿಕ್ರಮ್ ಚಿತೆಯ ಕಡೆಗೆ ನಿಧಾನವಾಗಿ ಮರಳಿ ನಡೆಯತೊಡಗಿದ.

ಹೆಣ ಕೇಳ್ತು “ನಾ ಯಾರೂಂತ ನಿಂಗೊತ್ತೇನೋ ಮೂದೇವಿ?”.

ವಿಕ್ರಮ್ “ನಂಗೊತ್ತು. ನಿಮ್ಮಜ್ಜೀ, ನೀನು ಆ ಪೂಜಾರಿಯ ದನದ ಆತ್ಮವೇ ತಾನೇ”.

ಬೇತಾಳ “ಓಹ್, ದನವಾ? ಏನಂತೇ ಆ ಗೋವಿನ್ ಕಥೆ?”.

ವಿಕ್ರಮ್ ಕಥೆ ಹೇಳ್ತಾ ಹೋದ, “ಮೇಯೋಕೇಂತ ಕಳ್ಸೋವಾಗ ಹೇಳೋರಿಲ್ಲ, ಕೇಳೋರಿಲ್ಲ. ಮೇಯೋಕೆ ಹುಲ್ಲೂ, ಸೊಪ್ಪೂ ಏನೂ ಸಿಗದಿರೋವಾಗ ಬೀದಿಬದೀಲಿ ಸಿಕ್ಕಿಸಿಕ್ಕಿದ್ನೆಲ್ಲಾ ತಿಂತಿತ್ತು. ಹೊಟ್ಟೆ ಸಿಕ್ಕಾಪಟ್ಟೆ ಊದ್ಬಿಟ್ಟು ದನ ಮೊನ್ನೆ ಸತ್ತೇ ಹೋಯ್ತು. ತರಕಾರಿ ಅಂಗ್ಡಿ ಮಾಲೀಕ ಜನಾರ್ಧನ ವಿಷ ತಿನ್ಸಿ ದನ ಸತ್ಹೋಗಿದ್ದು ಅಂತ ಪೂಜಾರಿ ಸತ್ಯನ ತಾಯಿ ಆರೋಪ ಮಾಡಿ ಊರೆಲ್ಲಾ ಸುಳ್ಳು ಸುದ್ದಿ ಹಬ್ಸಿದ್ಳು. ಆರೋಪದಿಂದ ನೊಂದ ಜನಾರ್ಧನ ತಾನು ವಿಷ ತಿನ್ಸಿಲ್ಲಾಂತ ತನ್ನ ಸ್ನೇಹಿತನಾದ ಸತ್ಯನ ಹತ್ರ ಅಂಗಾಲಾಚಿ ಬೇಡ್ಕೊಂಡ. ತಲೆ ಕೆಡಿಸ್ಕೋಬೇಡ, ಇರು ಒಂದ್ಸಲಿ ಪೋಸ್ಟ್ ಮಾರ್ಟಮ್ ಮಾಡ್ಸಿದ್ರಾಯ್ತು, ಆಮೇಲೆ ಜನ ನಿನ್ನ ಸಂಶಯ ಪಡೊಲ್ಲಾಂತ ಸತ್ಯ ಹೇಳ್ದ. ಪೋಸ್ಟ್ ಮಾರ್ಟಮ್ ನಡೀತು. ದನದ ಹೊಟ್ಟೆಯ ಒಳಗೆ ಯಾವ ವಿಷವೂ ಸಿಗ್ಲಿಲ್ಲ. ಆದ್ರೆ ವಿಷದ ಬದಲು ಸಿಕ್ಕಿದ್ದು ಬರೋಬ್ಬರಿ ಒಂಭತ್ತು ಕೇಜಿ ಪ್ಲಾಸ್ಟಿಕ್ಕು!!”.

“ಆ ಗೋವಿನ ಹಳೇ ಜನ್ಮದ ಗೋಳೇನು ಅಂತ ಇವಾಗ ನಾನ್ ಹೇಳ್ತೀನ್ ಕೇಳು” ಅಂದ ಬೇತಾಳ ಕಥೆ ಹೇಳ್ತಾ ಹೋಯ್ತು: “ನನ್ ತಾತನ ಕಾಲ್ದಿಂದ್ಲೇ ನಮ್ಮ ಜನ್ರಿಗೆ ಮೂಢನಂಬಿಕೆಗಳು ಜಾಸ್ತಿ. ಮೂಢ ನಂಬಿಕೆಗಳೇನಂದ್ರೆ; ಎಲ್ಲದಕ್ಕಿಂತ ಮೊದಲು ಹಣ, ಆಮೇಲೆ ಜೀವನಾವಶ್ಯಕವಲ್ಲದ ವೈಜ್ಞಾನಿಕ ಅನ್ವೇಷಣೆಗಳು, ಆಡಂಬರದ ವಿಲಾಸೀ ಜೀವನ ಇತ್ಯಾದಿಗಳು ಇದ್ರೇನೇ ಈ ಸಮಾಜದಲ್ಲಿ ಹೆಸರು, ಸಾಧನೆ ಮಾಡ್ಬಹುದು. ಹಾಗಿದ್ರೆ ಮಾತ್ರ ಉದ್ಯೋಗ, ಕುಟುಂಬ ಮತ್ತು ಆರೋಗ್ಯ ತನಗೆ ಸಿಗುತ್ತೆ ಎಂಬ ಭ್ರಮೆಯಲ್ಲಿದ್ದ. ಜಾಹೀರಾತುಗಳ ಹಿಂದೆ ಅಡಗಿರೋ ವಾಣಿಜ್ಯೋದ್ದೇಶಗಳನ್ನು ಗಮನಿಸದ ಜನ ತಮ್ಮ ಬದುಕಿಗೆ ಅತ್ಯವಶ್ಯಕವಾದ ಸೌಲಭ್ಯ ಮತ್ತು ಸೌಕರ್ಯಗಳ ಆದ್ಯತೆಗಳನ್ನೇ ಹಿಮ್ಮುಖವಾಗಿ ತಪ್ಪಾಗಿ ಉಲ್ಟಾ ಅರ್ಥ ಮಾಡ್ಕೊಂಡಿದ್ರು. ಉದಾಹರಣೆಗೆ ಹಳೇ ಜನ್ಮದಲ್ಲಿ ನಾ ಸಾಯೋದಕ್ಕೂ ಮೊದ್ಲು ನಂಗೊದಷ್ಟು ಜ್ಞಾನೋದಯ ಆಗಿತ್ತು. ನಾನಾಗ ಹೇಳ್ತಿದ್ ಮಾತಿದು, ಹಿಂಗೇ ಮುಂದುವರೆದ್ರೆ ಮಾನವರು ಈ ಜಗತ್ನಲ್ಲಿ ಇನ್ನೈವತ್ತು ವರ್ಷಾನೂ ಬದುಕಿರ್ತಾರೋ ಇಲ್ವೋ ಅಂತ ಹೇಳೋದ್ ಕಷ್ಟ. ನಾ ಸತ್ಮೇಲೆ ಮುಂದಿನ್ ಜನ್ಮದಲ್ಲಿ ಏನ್ಮಾಡ್ತೀಯಾ ಅಂತ ನನ್ನ ಯಮ ಕೇಳ್ದಾಗ ನಾನು ಫಸ್ಟ್ ರೇಂಕ್ ರಾಜು ಥರ ಬಾಹ್ಯಾಕಾಶ ವಿಜ್ಞಾನ ಸಂಶೋಧನೆ ಮತ್ತೆ ಮುಂದುವರೆಸ್ತೀನಿ ಅಂತಂದೆ. ಅದ್ಕೇ, ಯಮ ಯಕ್ಡದಲ್ಲಿ ನಂಗೆರಡು ಬಿಗ್ದು, ನೀನು ಇಂಡಿಯಾದಲ್ಲೊಂದು ದನವಾಗಿ ಹುಟ್ಟು ಬಡ್ಡಿಮಗ್ನೇ ಅಂತ ಶಾಪ ಕೊಟ್ಟ. ಈ ದನದ ಜನ್ಮದಲ್ಲಿ ನಾ ಸಾಯೋ ಕಾಲಕ್ಕಷ್ಟೇ ನಂಗೆ ಜ್ಞಾನೋದಯ ಆಯ್ತು. ಹಳೇ ಜನ್ಮದಲ್ಲಿ ನಾನು ನನ್ನಂಥಾ ಲಕ್ಷಗಟ್ಲೆ ವಿಜ್ಞಾನಿಗಳು ತಮ್ಮ ಆಯಸ್ಸು, ಜ್ಞಾನ, ಕೌಶಲ್ಯ ಮತ್ತು ಚೈತನ್ಯಗಳನ್ನು ಬಾಹ್ಯಾಕಾಶ ವಿಜ್ಞಾನಗಳಂಥಾ ಕೆಲಸಕ್ಕೆ ಬಾರದ ಅರೆಹುಚ್ಚುಗಳಿಗೆ ಬದಲಾಗಿ ನಮ್ಮ ಬದುಕಿಗೆ ಅನಿವಾರ್ಯವಾದ ಸೌಲಭ್ಯ ಮತ್ತು ಸೌಕರ್ಯಗಳ ಪೂರೈಕೆಯ ಸಂಷೋಧನೆಗೆ ಮತ್ತು ಅವುಗಳ ನಿರ್ವಹಣೆಗೆ ವಿನಿಯೋಗಿಸ್ಬೇಕಿತ್ತು. ಕಥೇ ಮುಗೀತು ವಿಕ್ರಮ್. ಈಗ ನನ್ ಪ್ರಶ್ನೇಗ್ ಉತ್ರ ಕೊಡು!”.

1ನೇ ಪ್ರಶ್ನೆ ಕೇಳ್ತು ಬೇತಾಳ: “ಕೊರೋನಾಗೆ ಇಂದಲ್ಲ ನಾಳೆ ಒಂದು ಗತಿ ಕಾಣಿಸ್ತೀವಿ ಅಂತಿಟ್ಕ. ಆದ್ರೆ ಕೊರೋನಾದಂಥಾ ವೈಜ್ಞಾನಿಕ ಸವಾಲುಗಳೆಷ್ಟಿವೆ ಅನ್ನೋದಕ್ಕೆ ಲೆಕ್ಕವೇ ಇಲ್ಲ. ಇವಾಗ ಇರೋ ರಾಜಕೀಯ ವ್ಯವಸ್ಥೆ, ಅರ್ಥವ್ಯವಸ್ಥೆ, ಶಿಕ್ಷಣವ್ಯವಸ್ಥೆಗಳಲ್ಲಿ ಇಂಥಾ ಸಮಸ್ಯೆಗಳನ್ನ ಎದುರಿಸೋಕೆ ಸಾಧ್ಯ ಇದೆಯಾ?”

ವಿಕ್ರಮ್ : “ಇಲ್ಲ”

2ನೇ ಪ್ರಶ್ನೆ ಕೇಳಿದ ಬೇತಾಳ : “ಈ ಸಮಸ್ಯೆಗಳನ್ನ ನೀನು ಹೇಗೆ ಎದುರಿಸ್ತೀಯಾ?”

ವಿಕ್ರಮ್ : “ನಿನ್ ಜೀವಾನೇ ಬಲಿ ತೆಗ್ದಿರೋ ಸಂಶೋಧನೆಯಾದ ಈ ಪ್ಲಾಸ್ಟಿಕ್ಕಿಂದ ಹಿಡಿದು ಕೊರೋನಾದಂಥಾ ಮಹಾಮಾರಿಗಳ ನಿಯಂತ್ರಣ ಮಾಡೋಕೆ ವಿಜ್ಞಾನ, ಅರ್ಥವ್ಯವಸ್ಥೆ, ಶಿಕ್ಷಣ, ವೈದ್ಯಕೀಯ, ರಾಜಕೀಯ, ಕಾನೂನು, ಮಾಧ್ಯಯ, ಇತ್ಯಾದಿ ಕ್ಷೇತ್ರಗಳಲ್ಲಿ ಸಮಸ್ಯಾ ನಿಗ್ರಹದಳಗಳನ್ನು ರಚಿಸ್ತೀನಿ. ಆಯಾಯಾ ಸಮಸ್ಯಾ ನಿಗ್ರಹದಳಗಳು ಆಯಾಯಾ ಕ್ಷೇತ್ರಗಳಿಗೆ ಬೇಕಾದ ತ್ಯಾಪೆ ಹಚ್ತಾವೆ. ಆದ್ಯತೆಗಳೆಲ್ಲಾ ಉಲ್ಟಾ ಆಗದ ಹಾಗೆ ಅವುಗಳೇ ನಿಯಂತ್ರಿಸ್ತಾವೆ. ಜಗತ್ತಿನಾದ್ಯಂತ ಯುವಜನತೆಗಳೇ ಈ ಸಮಸ್ಯಾ ನಿಗ್ರಹದಳಗಳನ್ನ ಮುನ್ನಡೆಸ್ತವೆ”.

ಬೇತಾಳನ ಕೊನೇ ಪ್ರಶ್ನೆ : “ಮಹಡಿ ಮೇಲೆ ಮಹಡಿ ಕಟ್ಟೋ ಕನ್ಸಲ್ ಮುಳುಗಿರೋ ನಮ್ ಜನಕ್ಕೆ ಅಂಗಳ್ದಾಗೆ ಬಿದ್ದಿರೋ ಚಿಕ್ ಚಿಕ್ ಮುಳ್ಳುಗ್ಳನ್ನ ಜಗಲೀಲೇ ಕುಂತು ದುರ್ಬೀನು ಹಿಡ್ಕೊಂಡು ಹುಡ್ಕಿದ್ರೂ ಕಾಣ್ಸಲ್ಲ. ಅಂಥದ್ರಲ್ಲೀ, ಮೇಲ್ಮಹಡಿಯ ತಾರಸಿ ಮೇಲ್ ಕುಂತು ಟೆಲಿಸ್ಕೋಪ್ ಹಿಡ್ಕಂಡು ಹುಡ್ಕಿದ್ರೆ ಕಾಣ್ಸುತ್ತಾ?”

ವಿಕ್ರಮ್ : ಮನ್ಸಲ್ಲೇ (ಎಂತ ಸಾವು ಮಾರಾಯಾ! ಇದೆಂತ ಪ್ರಶ್ನೆ..!!)

ತಪ್ಪಿಸ್ಕೊಂಡು ಓಡ್ತಿರೋ ಬೇತಾಳನ್ನ ವಿಕ್ರಮ್ ಕೇಳ್ತಾನೆ, “ಅಂದ್ಹಾಗೆ ನಿನ್ ಪೂರ್ತಿ ಹೆಸ್ರೇನು ಪಿಶಾಚಿ?”

ಬೇತಾಳನ ಉತ್ತರ : “ಸ್ಟೀಫನ್. ಸ್ಟೀಫನ್ ಹಾಕಿಂಗ್!!”

*

ಗೋವಿಂದ ಪ್ರಸಾದ ಎನ್. ಮತ್ತು ಪಾವನ ಭೂಮಿ ಬದುಕು ಸೆಂಟರ್ ಫಾರ್ ಲೈವ್ಲಿಹುಡ್ಸ್ ಲರ್ನಿಂಗ್ ನ ಹಳೆಯ ವಿದ್ಯಾರ್ಥಿಗಳು.

shares